ಎಲೆಕ್ಟ್ರಾನಿಕ್ಸ್
ನಿರ್ವಾತ, ಅನಿಲ ಮತ್ತು ಅರೆ ವಿದ್ಯುದ್ವಾಹಕಗಳ ಮೂಲಕ ಎಲೆಕ್ಟ್ರಾನುಗಳ ಹರಿಯುವಿಕೆಯ ತತ್ತ್ವಗಳ ಆಧಾರದ ಮೇಲೆ ರೂಪಗೊಂಡಿರುವ ಶಾಸ್ತ್ರ; ಭೌತಶಾಸ್ತ್ರದ ಒಂದು ವಿಶಿಷ್ಟ ವಿಭಾಗ. ವಿದ್ಯುತ್ ಮೋಟಾರು, ತಾಪಪ್ರಭಾದೀಪ (ಇನ್‍ಕ್ಯಾಂಡೆಸೆಂಟ್ ಲ್ಯಾಂಪ್) ಮೊದಲಾದುವುಗಳ ವಿವರಗಳು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸೇರುವುದಿಲ್ಲ. ಕಾರಣ, ಇಲ್ಲಿ ಎಲೆಕ್ಟ್ರಾನುಗಳು ನಿರ್ವಾತ, ಅನಿಲ ಅಥವಾ ಅಪೂರ್ಣ ವಿದ್ಯುದ್ವಾಹಕಗಳ ಮೂಲಕ ಹರಿಯುವುದಿಲ್ಲ; ಬದಲಾಗಿ ಉತ್ತಮ ವಿದ್ಯುದ್ವಾಹಕಗಳ ಮೂಲಕ ಹರಿಯುತ್ತವೆ. ನಿರ್ವಾತ ನಳಿಗೆ, ಅನಿಲಪೂರಿತ ನಳಿಗೆ, ಟ್ರಾನ್ಸಿಸ್ಟರ್ ಮೊದಲಾದುವುಗಳು ಎಲೆಕ್ಟ್ರಾನಿಕಸ್ ವಿಭಾಗಕ್ಕೆ ಸೇರುತ್ತವೆ. ಕಾರಣ, ಇಲ್ಲಿ ಎಲೆಕ್ಟ್ರಾನುಗಳು ನಿರ್ವಾತ, ಅನಿಲ ಇಲ್ಲವೇ ಅಪೂರ್ಣ ವಿದ್ಯುದ್ವಾಹಕಗಳ ಮೂಲಕ ಹರಿಯುತ್ತವೆ.

ಬೆಳೆವಣಿಗೆಯ ವಿವಿಧ ಹಂತಗಳು: ವಿದ್ಯುತ್ಪ್ರವಾಹ ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆಂದು ಡೆನ್ಮಾರ್ಕಿನ್ ಎಚ್.ಸಿ.ಎರ್‍ಸ್ಟೆಡ್ ಎಂಬ ವಿಜ್ಞಾನಿ ತೋರಿಸಿಕೊಟ್ಟ (1820). ಚಲನೆಯಲ್ಲಿರುವ ಅಯಸ್ಕಾಂತದ ಬಳಿಯಿರುವ ವಿದ್ಯುದ್ವಾಹಕದಲ್ಲಿ ವಿದ್ಯುತ್ ಉತ್ಪಾದನೆಯಾಗುವುದೆಂದು ಬ್ರಿಟಿಷ್ ವಿಜ್ಞಾನಿ ಮೈಕೆಲ್ ಫ್ಯಾರಡೆ ಪ್ರಕಟಿಸಿದ (1831). ವಿದ್ಯುಚ್ಛಕ್ತಿ ಮತ್ತು ಕಾಂತತ್ವಗಳನ್ನು ಕುರಿತು ಆಗ ದೊರೆತಿದ್ದ ಆಧಾರಗಳಿಂದ ಬ್ರಿಟಿಷ್ ಭೌತಶಾಸ್ತ್ರಜ್ಞ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‍ವೆಲ್ ವಿದ್ಯುತ್ಕಾಂತ ತರಂಗಗಳ ಅಸ್ತಿತ್ವವನ್ನು ಸೂಚಿಸಿದ (1864). ವಿದ್ಯುತ್ಪ್ರವಾಹ ಅನಿಲಗಳ ಮೂಲಕ ಹರಿಯಬಲ್ಲದೆಂದು ಥಾಮಸ್ ಆಲ್ವ ಎಡಿಸನ್ ತೋರಿಸಿಕೊಟ್ಟ (1883). ವಿದ್ಯುತ್ಕಾಂತ ತರಂಗಗಳ ರೂಪದಲ್ಲಿ ಶಕ್ತಿ ಆಕಾಶದ ಮೂಲಕ ಹರಿಯುವುದೆಂದು ಜರ್ಮನ್ ಭೌತವಿಜ್ಞಾನಿ ಹೀನರಿಚ್ ಹಟ್ರ್ಸ್ ಪ್ರಯೋಗ ಮೂಲಕ ತೋರಿಸಿ (1887) ಮ್ಯಾಕ್ಸ್‍ವೆಲ್ಲನ ವೈಜ್ಞಾನಿಕ ಊಹೆ ಸತ್ಯವೆಂದು ಸಾರಿದ. ಹಟ್ರ್ಸ್‍ನ ಪ್ರಯೋಗದಲ್ಲಿ ಶಕ್ತಿ ವಿಸರಣೆಗೊಂಡ ದೂರ ಕೆಲವೇ ಅಡಿಗಳಾದರೂ ಯಾವುದೇ ವಾಹಕದ ಸಹಾಯವಿಲ್ಲದೆ ರೇಡಿಯೊ ಅಲೆಗಳು ಸ್ಥಳಾಂತರಗೊಳ್ಳಬಹುದೆಂಬುದು ವಿಧಿತವಾಯಿತು. ವಿದ್ಯುತ್ಕಾಂತ ತರಂಗಗಳು ದೃಷ್ಟಿಗೆ ಅಗೋಚರವಾದರೂ ಅವು ಬೆಳಕಿನ ವೇಗದಲ್ಲಿ ಚಲಿಸುತ್ತವೆಂದು ಹಟ್ರ್ಸ್ ತೋರಿಸಿಕೊಟ್ಟ. ರೇಡಿಯೊ ತರಂಗಗಳು ಮತ್ತು ಬೆಳಕಿನ ತರಂಗಗಳು ವಿದ್ಯುತ್ಕಾಂತ ತರಂಗಗಳು ಎರಡು ವಿವಿಧ ರೂಪಗಳು. ವಿದ್ಯುತ್ಕಾಂತ ತರಂಗಗಳಲ್ಲಿ ಶಕ್ತಿ ವಿದ್ಯುತ್ ಮತ್ತು ಕಾಂತತ್ವದ ರೂಪದಲ್ಲಿರುತ್ತದೆ. ಮುಂದೆ ರಾಂಟ್‍ಜನ್ ಎಂಬಾತ ಎಕ್ಸ್‍ಕಿರಣಗಳನ್ನು ಕಂಡುಹಿಡಿದ (1895). ಅದೇ ವರ್ಷ ಮಾರ್ಕೊನಿ ದೂರಸಂಪರ್ಕಕ್ಕಾಗಿ ಉದ್ದವಾದ ಸರಿಗೆಯ ಆಂಟೆನದ ಒಂದು ರೇಡಿಯೊ ಮಾದರಿಯನ್ನು ನಿರ್ಮಿಸಿದ. 1901ರಲ್ಲಿ ಅವನು ಅಟ್ಲಾಂಟಿಕ್ ಸಾಗರದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ತಂತಿರಹಿತ ಪ್ರಸಾರವನ್ನು ಕಳಿಸಲು ಸಮರ್ಥನಾದ. ಅಲ್ಲಿಂದೀಚೆಗೆ ರೇಡಿಯೊ ವಿಧಾನದಲ್ಲಾದ ತೀವ್ರವಾದ ಪ್ರಗತಿಗೆ ನಿರ್ವಾತ ನಳಿಗೆಗಳ ಬಳಕೆ ಮತ್ತು ಆವಿಷ್ಕಾರಗಳು ಕಾರಣ. ಫ್ಲೆಮಿಂಗ್ ಎಂಬಾತ ಡಯೋಡನ್ನು ಕಂಡುಹಿಡಿದ (1905). ವಿದ್ಯುತ್ ಸಂಕೇತಗಳನ್ನು ವರ್ಧಿಸುವಂಥ ಆಡಿಯೋನ್ ನಳಿಗೆಗಳನ್ನು ಫೋರೆಸ್ಟ್ ಎಂಬಾತ ತಯಾರಿಸಿದ (1906). 1920ರಲ್ಲಿ ಅಮೆರಿಕದ ಪಿಟ್ಸ್‍ಬರ್ಗಿನಲ್ಲಿ ಕ್ರಮಬದ್ಧವಾದ ರೇಡಿಯೊ ಪ್ರಸಾರ ಪ್ರಾರಂಭವಾಯಿತು. ವ್ಯವಸ್ಥಿತವಾದ ಟೆಲಿವಿಷನ್ ಪ್ರಸಾರ 1945ರಲ್ಲಿ ಕಾಣಿಸಿಕೊಂಡಿತು. ಅಪೂರ್ಣ ವಿದ್ಯುದ್ವಾಹಕಗಳ ತತ್ತ್ವ 1930ರಲ್ಲೇ ಪ್ರತಿಪಾದಿಸಲ್ಪಟ್ಟಿದ್ದರೂ ಟ್ರಾನ್ಸಿಸ್ಟರಿನ ಉದಯವಾದದ್ದು 1948ರಲ್ಲಿ. ಟ್ರಾನ್ಸಿಸ್ಟರಿನ ಸಂಶೋಧನೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲು. ಈ ಸಂಶೋಧನೆಯ ಕೀರ್ತಿ ಜೆ. ಬಾರ್ಡೀನ್ ಮತ್ತು ಡಬ್ಲ್ಯು. ಎಚ್.ಬ್ರೇಟನ್ ಎಂಬುವರಿಗೆ ಸಲ್ಲುತ್ತದೆ. ಕ್ರಿಯಾವಿಶೇಷಗಳ ಒಂದು ವಿಹಂಗಮ ನೋಟ ಹೀಗಿದೆ:
ರಕ್ಟಿಫಿಕೇಶನ್: ಪರ್ಯಾಯ ಪ್ರವಾಹವನ್ನು ಏಕಮುಖ ಪ್ರವಾಹವನ್ನಾಗಿ ಪರಿವರ್ತಿಸುವ ಕಾರ್ಯ.
ವರ್ಧನೆ: ದುರ್ಬಲವಾದ ವಿದ್ಯುತ್ ಸಂಕೇತಗಳನ್ನು ಪ್ರಬಲಗೊಳಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡುವ ಕ್ರಿಯೆ (ಆಂಪ್ಲಿಫಿಕೇಶನ್).

ಆಂದೋಳನ: ಹೆಚ್ಚು ಆವರ್ತಸಂಖ್ಯೆ (ಫ್ರೀಕ್ವೆನ್ಸಿ) ಇರುವ ಪರ್ಯಾಯ ಪ್ರವಾಹದ ಉತ್ಪಾದನೆ (ಆಸಿಲೇಷನ್). ಒಂದು ವರ್ಧಕದ ಕೊಡುಗೆಯ ಒಂದಂಶವನ್ನು ಅದಕ್ಕೆ ಮರಳಿ ಒದಗಿಸಿ ಅದು ಸ್ವಪೋಷಕವಾಗುವಂತೆ ಮಾಡುವುದು ಆಂದೋಳನದ ವಿಧಾನ.

ಆವರ್ತಸಂಖ್ಯೆ ಪರಿವರ್ತನೆ: ಒಂದು ಆವರ್ತಸಂಖ್ಯೆ ಇರುವ ತರಂಗವನ್ನು ಇನ್ನೊಂದು ಆವರ್ತಸಂಖ್ಯೆಯ ತರಂಗದೊಡನೆ ಬೆರೆಸಿದಾಗ ದೊರೆಯುವ ಉತ್ಪನ್ನದಲ್ಲಿ, ಆ ಎರಡು ಆವರ್ತಸಂಖ್ಯೆಗಳ ವ್ಯತ್ಯಾಸದಷ್ಟು ಆವರ್ತಸಂಖ್ಯೆ ಇರುವ ವಿಶೇಷಗಳು ಉತ್ಪನ್ನವಾದ ಹೊಸತರಂಗದಲ್ಲೂ ಕಂಡುಬರುತ್ತದೆ.

ಮಾಡ್ಯುಲೇಶನ್: ವಿದ್ಯುತ್ಕಾಂತ ತರಂಗಗಳ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಸಮಾಚಾರವನ್ನು ಪ್ರಸರಿಸಲು ಶ್ರವ್ಯ ತರಂಗಗಳನ್ನು ಬಳಸುವಂತಿಲ್ಲ. ಈ ರೀತಿಯ ಪ್ರಸಾರಕ್ಕೆ ರೇಡಿಯೊ ತರಂಗಗಳ ಬಳಕೆ ಅನಿವಾರ್ಯ, ಹೆಚ್ಚು ಆವರ್ತಸಂಖ್ಯೆ ಇರುವ ರೇಡಿಯೊ ತರಂಗವನ್ನು ಸಮಾಚಾರಗರ್ಭಿತವಾದ ಶ್ರವ್ಯ ತರಂಗವಾಹಕದಂತೆ ಮಾಡಬೇಕಾಗುವುದು. ವಾಹಕ ತರಂಗದ ಪರಿಣಾಮವನ್ನು ಅಥವಾ ಆವರ್ತಸಂಖ್ಯೆಯನ್ನು ಶ್ರವ್ಯ ತರಂಗದ ಏರಿಳಿತಕ್ಕನುಗುಣವಾಗಿ ಮಾರ್ಪಡಿಸುವ ಕ್ರಿಯೆಯೇ ಮಾಡ್ಯುಲೇಶನ್. ಹೀಗೆ ಮಾಡ್ಯುಲೇಶನ್ ಮಾಡಲ್ಪಟ್ಟ ವಾಹಕತರಂಗವನ್ನು ಏರಿಯಲಿನಿಂದ ಬಿತ್ತರಿಸಲಾಗುವುದು. 

ಡಿಮಾಡ್ಯುಲೇಶನ್: ಮಾಡ್ಯುಲೇಶನ್‍ಗೊಂಡ ವಾಹಕ ತರಂಗದಿಂದ ಶ್ರವ್ಯ ತರಂಗವನ್ನು ಮರಳಿ ಪಡೆಯುವ ಕ್ರಿಯೆ.
ಪ್ರಭಾಚಿತ್ರ ಉತ್ಪನ್ನ (ಲೈಟ್ ಇಮೇಜ್ ಪ್ರೊಡಕ್ಷನ್): ಎಲೆಕ್ಟ್ರಾನುಗಳ ಎಲೆಕ್ಟ್ರಾನ್ ಕಿರಣನಳಿಗೆಯ ಪ್ರತಿದೀಪ್ತಶೀಲ ತೆರೆಯನ್ನು (ಫ್ಲೂರಸೆಂಟ್ ಸ್ಕ್ರೀನ್) ಸ್ಪರ್ಶಿದಾಗ ಆ ಸ್ಪರ್ಶಸ್ಥಾನದಿಂದ ಬೆಳಕಿನ ವಿಸರ್ಜನೆಯಾಗುತ್ತದೆ. ಯಾವುದೊಂದು ತರಂಗದ ಸ್ವರೂಪಚಿತ್ರ ಅಥವಾ ಇನ್ನಾವುದೇ ದೃಶ್ಯಚಿತ್ರಗಳನ್ನು ತೆರೆಯಮೇಲೆ ಮೂಡಿಸಲು ಕ್ಯಾಥೋಡ್ ಕಿರಣ ನಳಿಗೆಗಳು ಉಪಯೋಗವಾಗುತ್ತವೆ. 

ದ್ಯುತಿವಿದ್ಯುತ್‍ಕ್ರಿಯೆ (ಫೋಟೊ ಎಲೆಕ್ಟ್ರಿಕಲ್ ಆಕ್ಷನ್): ಕೆಲವು ವಸ್ತುಗಳ ಮೇಲ್ಮೈಯನ್ನು ಬೆಳಕಿನ ಕಿರಣಗಳು ಸ್ಪರ್ಶಿಸಿದಾಗ ಆ ವಸ್ತುವಿನಿಂದ ಎಲೆಕ್ಟ್ರಾನುಗಳ ವಿಸರ್ಜನೆಯಾಗುತ್ತದೆ. ಇವು ಪ್ರವಾಹರೂಪದಲ್ಲಿ ಹರಿಯುತ್ತದೆ. ಇದರ ಪ್ರಮಾಣ ಬೆಳಕಿನ ಆವರ್ತಸಂಖ್ಯೆ ಮತ್ತು ಅದರ ತೀಕ್ಷ್ಣತೆಯನ್ನು ಅವಲಂಬಿಸಿದೆ. ಈ ತತ್ತ್ವವನ್ನು ಬಳಸಿ ಕಾರ್ಯನಿರ್ವಹಿಸುವ ನಳಿಗೆಗಳಿಗೆ ದ್ಯುತಿವಿದ್ಯುತ್ ನಳಿಗೆಗಳೆಂದು ಹೆಸರು. 

ಎಲೆಕ್ಟ್ರಾನಿಕ್ಸಿನ ಬಳಕೆ: ಎಲೆಕ್ಟ್ರಾನಿಕ್ಸಿನ ತತ್ತ್ವ ಮತ್ತು ಗುಣ ವಿಶೇಷಗಳನ್ನು ಆಧರಿಸಿ ತಯಾರಿಸಿದ ಸಾಧನಗಳ ವೈವಿಧ್ಯ ಅಸಂಖ್ಯಾತ. ವಿದ್ಯುತ್ತಿನ ಬಳಕೆಯ ಕ್ಷೇತ್ರವನ್ನು ಸ್ಥೂಲವಾಗಿ ಸಂಪರ್ಕ (ಕಮ್ಯುನಿಕೇಶನ್), ಕೈಗಾರಿಕಾ ನಿಯಂತ್ರಣ, ಬೆಳಕು ಪಡೆಯುವಿಕೆ ಮತ್ತು ಉಪಕರಣಗಳು ಎಂಬ ಭಾಗಗಳಾಗಿ ವಿಭಾಗಿಸಬಹುದು. 
ಸಂಪರ್ಕ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಳಕೆ ಅತ್ಯಧಿಕವಾಗಿದೆ. ಶ್ರವ್ಯ, ರೇಡಿಯೊ, ಟೆಲಿವಿಷನ್, ರಾಡರ್ ಮೊದಲಾದುವು ಈ ಪ್ರಮುಖ ಉಪವಿಭಾಗಗಳು. 

ಕಳೆದ ದಶಕದಿಂದ ಕೈಗಾರಿಕಾಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್‍ನ ಬಳಕೆ ಬಲುವಾಗಿ ವಿಸ್ತರಿಸಿದೆ. ಪರ್ಯಾಯ ಪ್ರವಾಹದಿಂದ ಏಕಮುಖ ಪ್ರವಾಹದ ಉತ್ಪಾದನೆ, ಆವರ್ತ ಸಂಖ್ಯೆಯ ಪರಿವರ್ತನೆ, ಸ್ವಯಂಚಾಲಿತ ನಿಯಂತ್ರಣ, ಮೋಟಾರುಗಳ ವೇಗನಿಯಂತ್ರಣ, ಏಕಮುಖ ಮತ್ತು ಪರ್ಯಾಯ ಪ್ರವಾಹೋತ್ಪಾದಕಗಳ ಒತ್ತಡ ನಿಯಂತ್ರಣ, ಕಿಡಿವಿರಹಿತ ತೆರೆ-ಮುಚ್ಚು ಗುಂಡಿಗಳು (ಆನ್- ಆಫ್ ಸ್ವಿಚ್ಚುಗಳು) ವಿದ್ಯುತ್ ಬೆಸುಗೆಯ ಕಾಲಾವಧಿ ನಿಯಂತ್ರಣ, ಬೆಳಕಿನ ನಿಯಂತ್ರಣ, ಉಷ್ಣತಾನಿಯಂತ್ರಣ ಮೊದಲಾದವು ಔದ್ಯೋಗಿಕ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್‍ನ ಉಪಯೋಗದ ಕೆಲವು ಉದಾಹರಣೆಗಳು.

ಬೆಳಕನ್ನುಂಟುಮಾಡಲು ಮತ್ತು ಅದನ್ನು ನಿಯಂತ್ರಿಸಲು ಎಲೆಕ್ಟ್ರಾನಿಕ್ಸ್ ಸಾಧನಗಳು ಅತ್ಯಾವಶ್ಯಕ. ನಿಯಾನ್ ನಳಿಗೆಗಳು, ಸೋಡಿಯಂ ಅನಿಲದೀಪಗಳು ಮಕ್ರ್ಯುರಿ ಅನಿಲದೀಪಗಳು ಮತ್ತು ಪ್ರತಿದೀಪ್ತಶೀಲ ದೀಪಗಳು ಎಲೆಕ್ಟ್ರಾನಿಕ್ಸಿನ ಬಳಕೆಯ ಉತ್ತಮ ನಿದರ್ಶನಗಳು. 

ಎಲೆಕ್ಟ್ರಾನಿಕ್ಸಿನ ಉಪಕರಣಗಳನ್ನು ಉಪಯೋಗಿಸಿ ಬಲುಬೇಗ ಮತ್ತು ಸೂಕ್ಷ್ಮವಾಗಿ ವಿದ್ಯುತ್ ಮತ್ತಿತ್ತರ ಪ್ರಮಾಣಗಳನ್ನು ಅಳೆಯುವುದು ಸಾಧ್ಯ. ಒತ್ತಡ, ಪ್ರವಾಹ, ವಿದ್ಯುತ್, ಆವರ್ತಸಂಖ್ಯೆ ನಿರೋಧ ಮೊದಲಾದ ವಿದ್ಯುತ್ ಪ್ರಮಾಣಗಳನ್ನು ಕಾಲಾವಧಿ, ವೇಗ ದೂರ, ಬೆಳಕಿನ ತೀಕ್ಷ್ಣತೆ ಮೊದಲಾದ ಅವಿದ್ಯುತ್ ಪ್ರಮಾಣಗಳನ್ನೂ ಅಳೆಯಬಹುದು. ಎಲೆಕ್ಟ್ರಾನಿಕ್ ಗಣಕಯಂತ್ರಗಳನ್ನು ಬಳಸಿ ಗಣಿತದ ಹಲವು ಕ್ಲಿಷ್ಟಸಮಸ್ಯೆಗಳನ್ನು ಬಹಳ ಸುಲಭವಾಗಿ ಬಿಡಿಸಬಹುದು.					    
(ಕೆ.ಸಿ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ